ಜಲಚಿಕಿತ್ಸೆ -
 	ಕೇವಲ ನೀರಿನ ಉಪಯೋಗದಿಂದಲೇ ಸಕಲ ವ್ಯಾಧಿಗಳನ್ನೂ ಗುಣಪಡಿಸಬಹುದೆಂದು ಪರಿಗಣಿಸಿ ಆಚರಿಸುವ ಚಿಕಿತ್ಸಾವಿಧಾನ (ಹೈಡ್ರೋಥೀರಪಿ). ಪ್ರಕೃತಿಯಲ್ಲಿ ದೊರೆಯುವ ನೀರನ್ನು ಸೇವಿಸುವುದೂ ಸ್ನಾನ, ಮುಳುಗಡೆ (ಇಮ್ಮರ್ಷನ್) ಮುಂತಾದ ವಿಧಾನಗಳಿಂದ ಅಲ್ಪಕಾಲಿಕವಾಗಿ ಇಲ್ಲವೇ ದೀರ್ಘಕಾಲಿಕವಾಗಿ ನೀರಿನೊಡನೆ ಸಂಪರ್ಕಗೊಳಿಸಿಕೊಳ್ಳುವುದೂ ಈ ವಿಧಾನದಲ್ಲಿ ಆಚರಿಸುವ ಮಾರ್ಗಗಳು. ಬಹು ಹಿಂದಿನಿಂದಲೂ ಪ್ರಪಂಚದ ನಾನಾಕಾಲಗಳಲ್ಲಿ ಜಲಚಿಕಿತ್ಸೆ ಪ್ರಮುಖವಾಗಿ ಜನಪ್ರಿಯವಾಗಿ ಇದ್ದುದೂ ಇರುವುದೂ ಕಂಡುಬಂದಿದೆ. ದೇಹದಲ್ಲಿ ನೀರಿನಿಂದಾಗುವ ಪರಿಣಾಮಗಳನ್ನು ಅರಿತು ಜ್ವರನೋವುಗಳ ಶಮನಕ್ಕೆ ತಣ್ಣೀರಿನ ಉಪಯೋಗವನ್ನು ಹಿಪಾಕ್ರಟೀಸ್ (ಕ್ರಿ.ಪೂ.ಸು. 460-377) ಸೂಚಿಸಿದ್ದ. ಪ್ರಾಚೀನ ಗ್ರೀಕರೂ ರೋಮನ್ನರೂ ವಿವಿಧ ಚಿಲುಮೆ ನೀರುಗಳ ಹಾಗೂ ಬಿಸಿನೀರು ತಣ್ಣೀರುಸ್ನಾನಗಳ ಪ್ರಯೋಜನಗಳನ್ನು ತಿಳಿದಿದ್ದರು. ರೋಮನ್ನರಂತೂ ಚಿಲುಮೆಗಳು ಕಂಡಲ್ಲೆಲ್ಲ ಚಿಕಿತ್ಸಾ ಸ್ಥಳಗಳನ್ನು ಸ್ಥಾಪಿಸುತ್ತಿದ್ದರು. ಇಂಗ್ಲೆಂಡಿನ ಬಾತ್, ಯೂರೋಪಿನಲ್ಲಿ ಬೇಡೆನ್‍ಬೇಡೆನ್, ಸೇಂಟ್ ಮಾರಿಟ್ಸ್, ಯೈಕ್ಸ್ ಮುಂತಾದ ಕಡೆ ರೋಮನ್ನರು ಸ್ಥಾಪಿಸಿದ್ದ ಚಿಕಿತ್ಸಾಸ್ಥಳಗಳು ಇಂದಿಗೂ ಇವೆ. ಗೇಲೆನ್ನನು (ಕ್ರಿ.ಶ. ಸುಮಾರು 130-200) ಅನೇಕ ರೋಗಗಳಿಗೆ ನೀರಿನ ಸೇವನೆ, ನೀರಿನೊಳಗೆ ಅಂಗಮರ್ದನಗಳನ್ನು (ಮ್ಯಾಸೇಜ್) ವಿಧಿಸಿದ್ದ. ಆದರೆ ಈ ವಿಧಾನಗಳನ್ನು ಚಿಕಿತ್ಸಾಕ್ರಮಗಳೆಂದೇ ಪರಿಗಣಿಸಿ ಪ್ರಥಮವಾಗಿ ಲೇಖಿಸಿದ್ದು ಸುಮಾರು ಕ್ರಿಸ್ತಶಕೆಯ ಪ್ರಾರಂಭಕಾಲದಲ್ಲಿದ್ದ ಸೆಲ್ಸಸ್ ಎಂಬಾತನೆಂದು ತಿಳಿದುಬಂದಿದೆ. ಇಲ್ಲಿಂದ ಮುಂದಕ್ಕೆ ಜಲಚಿಕಿತ್ಸೆ ಉಪೇಕ್ಷಿಸಲ್ಪಟ್ಟಿತಾದರೂ ನವೋದಯ (ರಿನೇಸಾನ್ಸ್) ಕಾಲದಲ್ಲಿ (ಕ್ರಿ.ಶ.ಸು. 1420) ಸವಾನರೋಲ, ಬಾರ್ಸಿಸಿಯೋ ಮುಂತಾದವರಿಂದ ಅದು ಇಟಲಿಯಲ್ಲಿ ಪುನಃ ಆಚರಣೆಗೆ ತರಲ್ಪಟ್ಟು ಯೂರೋಪಿನಲ್ಲೆಲ್ಲ ವ್ಯಾಪಿಸಿತು. ಎಲ್ಲೆಲ್ಲೂ ಜಲಚಿಕಿತ್ಸೆಗಾಗಿ ಸ್ನಾನಗೃಹಗಳು ಏರ್ಪಟ್ಟವು. ಆದರೆ ಚಿಕಿತ್ಸೆಯ ನೆಪದಲ್ಲಿ ಈ ಸ್ನಾನಗೃಹಗಳು, ಲೈಂಗಿಕ ಲಂಪಟರಿಂದ ದುರುಪಯೋಗಿಸಲ್ಪಡಲು ಪ್ರಾರಂಭವಾಗಿ ಅವುಗಳನ್ನೆಲ್ಲ ಮುಚ್ಚಿಬಿಡಬೇಕಾಯಿತು. ಜಳಕ ಒಂದು ಚಿಕಿತ್ಸಾಕ್ರಮವಾಗಿ ಇಂಗ್ಲೆಂಡಿನಲ್ಲಿ ಬಳಕೆಗೆ ಬಂದದ್ದು ಇನ್ನೂ ಸುಮಾರು 250 ವರ್ಷಗಳ ತರುವಾಯ. ಸ್ನಾನದಿಂದ ಸರ್ವಥಾ ತೊಂದರೆ ಏನೂ ಇಲ್ಲವೆಂದು ಸಾರಿದ ಸರ್ ಜಾನ್ ಫ್ಲೋಯರ್ (1649-1734) ಎಂಬಾತ ಇಂಗ್ಲೆಂಡಿನಲ್ಲಿ ತಣ್ಣೀರು ಬಿಸಿನೀರಿನ ಸ್ನಾನದ ಯೋಗ್ಯ ವಿಧಾನ ಎಂಬ ಗ್ರಂಥವನ್ನು ಬರೆದ. ಅದು 1697ರಿಂದ 1722ರವರೆಗಿನ ಅಂತರದಲ್ಲಿ ಎಂಟು ಸಲ ಪ್ರಕಟಿಸಲ್ಪಡುವಷ್ಟು ಜನಾದರಣೀಯವಾಯಿತು. ಸುಮಾರು ಇದೇ ಕಾಲದಲ್ಲಿ ಜರ್ಮನಿಯಲ್ಲಿ ಜಾನ್ ಸಿಸ್ಮಂಡು ಹಾಹ್ನ್ (1664-1742) ಎಂಬಾತ ಸೈಕ್ರೋಲುಪೋಸಿಯ ಎಂಬ ಗ್ರಂಥವನ್ನು ಬರೆದು ಅದರಲ್ಲಿ ಜಲಚಿಕಿತ್ಸೆಯ ವಿವಿಧ ವಿಧಾನಗಳನ್ನು ವಿಸ್ತಾರವಾಗಿ ವಿವರಿಸಿದ. ಮುಂದೆ ವಿಲಿಯಮ್ ರೈಟ್ (1735-1819) ಎಂಬ ವೈದ್ಯನೂ ಅವನ ಉಪದೇಶದಂತೆ ಜೇಮ್ಸ್ ಕರ್ರಿ (1756-1805) ಎಂಬ ವೈದ್ಯನೂ ಇಂಗ್ಲೆಂಡಿನಲ್ಲಿ ಜ್ವರದ ಚಿಕಿತ್ಸೆಗೆ ತಣ್ಣೀರಿನ ಸ್ನಾನವನ್ನೇ ವಿಧಿಸುತ್ತಿದ್ದರು. ಅಮೆರಿಕದ ಫಿಲಿಡೆಲ್ಫಿಯದಲ್ಲಿ ಬೆಂಜûಮಿನ್ ರಷ್ (1745-1813) ಎಂಬ ವೈದ್ಯ ಜ್ವರಚಿಕಿತ್ಸೆಗೆ ತಣ್ಣೀರಿನ ಸ್ನಾನ ವಿಧಾನವನ್ನು ಮಾತ್ರವಲ್ಲದೆ ತಲೆಗೆ ಬರ್ಫ ಕಟ್ಟುವುದನ್ನು ಕೂಡ ಆಚರಣೆಗೆ ತಂದ. ಆದರೆ ಜಲಚಿಕಿತ್ಸೆಯ ಪ್ರಮುಖ ಪ್ರತಿಪಾದಕನೆಂದರೆ 19ನೆಯ ಶತಮಾನದ ಪ್ರಥಮಾರ್ಧದಲ್ಲಿ ಬದುಕಿದ್ದ ಸೈಲೇಷಿಯದ ಬೇಸಾಯಗಾರನಾದ ವಿನ್ಸೆನ್ಸ್ ಪ್ರಿಯೆಸ್‍ನಿಟ್ಸ್ (1799-1851). ತನ್ನ ಜೀವಮಾನವನ್ನೇ ಜಲಚಿಕಿತ್ಸೆಯ ಪ್ರಚಾರಕ್ಕಾಗಿ ಮುಡುಪಾಗಿಟ್ಟ ಇವನನ್ನು ಆಧುನಿಕ ಜಲಚಿಕಿತ್ಸಾ ಜನಕನೆಂದು ಅನೇಕರು ಗಣಿಸುತ್ತಾರೆ. ಸಕ್ರಮ ಸ್ನಾನವೇ ಆರೋಗ್ಯಕ್ಕೆ ನೇರಮಾರ್ಗ ಮತ್ತು ಜಳಕ ಮಾಡಿಕೊಂಡೇ ಸರ್ವರೋಗಗಳನ್ನೂ ಪರಿಹರಿಸಿಕೊಳ್ಳಬಹುದು. ಎಂಬುದಾಗಿ ಅತಿ ಸರಳವಾಗಿಯೂ ಮನನಾಟುವಂತೆಯೂ ಈತ ಸಾರಿದ. 1829ರಲ್ಲಿ ಇವನು ಸೈಲೇಷಿಯದ ವನಾಂತರ ಪ್ರದೇಶದಲ್ಲಿ ಸ್ನಾನಗೃಹಗಳನ್ನು ಸ್ಥಾಪಿಸಿ, ಇವುಗಳ ಉಪಯೋಗ ಪಡೆಯುವಷ್ಟು ಖರ್ಚು ಮಾಡಬಲ್ಲ ಧನಾಢ್ಯಗಿರಾಕಿಗಳಿಗೆ ಕ್ಲುಪ್ತವಾಗಿ ತಣ್ಣೀರಿನ ಸ್ನಾನ, ಮೈಕೈ ನೀವುವಿಕೆ, ಮರ ಕಡಿಯುವಂಥ ಶ್ರಮಸಾಧ್ಯ ವ್ಯಾಯಾಮ ಮುಂತಾದುವನ್ನು ಏರ್ಪಡಿಸಿದ. ಪ್ರಾರಂಭದಲ್ಲಿ ಕೇವಲ 45 ಜನ ಈ ಚಿಕಿತ್ಸಾಕ್ರಮದ ಲಾಭ ಪಡೆಯಲು ಬಂದರು. ಆದರೆ 1843 ರಷ್ಟರ ಹೊತ್ತಿಗೆ ವರ್ಷಕ್ಕೆ 1500 ಜನ ನಾಮುಂದು ತಾ ಮುಂದು ಎಂದು ಬರುವಂತಾಯಿತು. ಪ್ರಿಯೆಸ್‍ನಿಟ್ಸ್‍ನು ಉಳುಕು, ಮೂಕನೋವು ಮುಂತಾದವಕ್ಕೆ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಬಿಗಿಯಾಗಿ ಕಟ್ಟುವುದು (ಕೋಲ್ಡ್ ಪ್ಯಾಕ್), ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಬಟ್ಟೆಯಿಂದ ಮೈಕೈ ಒರೆಸಿಕೊಳ್ಳುವುದು (ಸ್ಪಂಜ್‍ಬಾತ್), ನೀರಿನಲ್ಲಿ ಕಾಲನ್ನು ಅದ್ದಿ ಇಟ್ಟುಕೊಳ್ಳುವುದು (ಫುಟ್ ಬಾತ್) ಪಿಚಕಾರಿ ಪ್ರಯೋಗ (ಡೂಶ್) ಮುಂತಾದ, ಇಂದಿಗೂ ಅನುಸರಿಸುವ, ಜಲಚಿಕಿತ್ಸಾವಿಧಾನಗಳನ್ನು ಕಂಡುಹಿಡಿದು ಜನಾದರಣೀಯವನ್ನಾಗಿ ಮಾಡಿದ. ಆಸ್ಟ್ರಿಯ ಜರ್ಮನಿಗಳಲ್ಲಿ ಮಾತ್ರವೇ ಅಲ್ಲದೆ ವಿಲ್‍ಹೆಲ್ಮ್ ವಿಂಟರ್‍ನಿಟ್ಸ್ (1834-1917) ಎಂಬಾತನ ಪ್ರಯತ್ನದಿಂದ ವಿಯೆನ್ನದಲ್ಲೂ ಸೈಮನ್ ಬರೂಕ್ (1840-1924) ಎಂಬಾತನ ಪ್ರಯತ್ನದಿಂದ ಅಮೆರಿಕದ ನ್ಯೂಯಾರ್ಕಿನಲ್ಲೂ ಜಲಚಿಕಿತ್ಸಾಕ್ರಮಗಳು ಜನಪ್ರಿಯವಾದುವು. ಇಂಗ್ಲೆಂಡಿನಲ್ಲಿ ಆ ವರೆಗೆ ಅಲಕ್ಷಿಸಲ್ಪಟ್ಟ ಬಾತ್ ಪಟ್ಟಣದ ಸ್ನಾನಗೃಹಗಳೂ ಚಿಲುಮೆಗಳೂ ಪುನಃ ಪ್ರಸಿದ್ಧಿಗೆ ಬಂದವು.

	1493ರಿಂದ 1541ರವರೆಗೆ ಬದುಕಿದ್ದ ಪರಾಸೆಲ್ಸಸ್ ಎಂಬ ವಿಜ್ಞಾನಿ ಆ ಕಾಲದಲ್ಲಿ ಯೂರೋಪಿನ ಸೇಂಟ್ ಮಾರಿಟ್ಸ್‍ನ ಚಿಲುಮೆ ನೀರಿನ ಸಂಶ್ಲೇಷಣೆಯನ್ನು ಮಾಡಿ ಅದರಲ್ಲಿ ವಿಲೀನವಾಗಿರುವ ಲವಣ ವಸ್ತುಗಳನ್ನು ಶೋಧಿಸಿದ್ದ. ಆದರೂ ಚಿಲುಮೆ ನೀರಿನಲ್ಲಿ ವಿಲೀನವಾದ ಲವಣ ಅನಿಲಗಳ ಹಾಗೂ ನೀರಿನ ಉಷ್ಣತೆಯ ವಿಷಯವಾಗಿ ವೈದ್ಯರು 19ನೆಯ ಶತಮಾನದ ಪ್ರಾರಂಭದವರೆಗೂ ಯೋಚಿಸಿರಲಿಲ್ಲ. ಇಂಗ್ಲೆಂಡಿನಲ್ಲಿ ಥಾಮಸ್ ಗಾರ್ನೆಟ್ ಎಂಬಾತ ಮೊದಲಿಗೆ ಬೇರೆ ಬೇರೆ ಚಿಲುಮೆಗಳ ನೀರಿನ ಉಷ್ಣತೆಯನ್ನು ಮಾಪಿಸಿ ಬಿಸಿನೀರಿನಲ್ಲಿ ಸಂಪರ್ಕಗೊಳ್ಳಬೇಕಾದ ಕಾಲವನ್ನು ನಿಗದಿಗೊಳಿಸಿದ. ಜಲಚಿಕಿತ್ಸೆ ಹೆಚ್ಚು ಜನಾದರಣೀಯವಾಗಿ ಹೊಸ ಹೊಸ ಚಿಲುಮೆಗಳು ಕಂಡುಹಿಡಿಯಲ್ಪಟ್ಟೊಡನೆಯೇ ಅವುಗಳ ನೀರಿನ ಉಷ್ಣಮಾಪನ ಮತ್ತು ಸಂಶ್ಲೇಷಣೆಯನ್ನು ಮಾಡುವುದಕ್ಕೆ ವೈದ್ಯರೂ ಪ್ರಾರಂಭಿಸಿ, ಆಯಾ ಚಿಲುಮೆಯ ನೀರು ಅದರಲ್ಲಿ ವಿಲೀನವಾಗಿರುವ ಯಾವುದೋ ಲವಣ ಅಥವಾ ಅನಿಲದಿಂದ ಇಲ್ಲವೆ ಅದರ ವಿಶಿಷ್ಟ ಉಷ್ಣತೆಯಿಂದ ತನ್ನ ಪ್ರಭಾವವನ್ನು ಬೀರುತ್ತದೆ ಎಂದು ಸಾರುವುದಕ್ಕೆ ಪ್ರಾರಂಭಿಸಿದರು. ಸೋಡಿಯಂ, ಪೊಟ್ಯಾಸಿಯಂ, ಲಿಥಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಮ್ಯಾಂಗನೀಸ್, ಕಬ್ಬಿಣ, ಗಂಧಕ, ಬ್ರೋಮಿನ್ ಹಾಗೂ ಅಪರೂಪವಾಗಿ ಅಯೋಡಿನ್ ಇವುಗಳ ಲವಣಗಳು ಮತ್ತು ಇಂಗಾಲದ ಡೈಆಕ್ಸೈಡ್ ಹೈಡ್ರೋಜನ್ ಸಲ್ಫೈಡ್ ಇತ್ಯಾದಿ ಅನಿಲಗಳು ವಿವಿಧ ಚಿಲುಮೆ ನೀರುಗಳ ಚಿಕಿತ್ಸಾಗುಣಕ್ಕೆ ಕಾರಣಗಳು ಎಂದು ವೈದ್ಯರಲ್ಲೂ ಜನತೆಯಲ್ಲೂ ಸಾರ್ವತ್ರಿಕವಾದ ನಂಬಿಕೆಯಾಯಿತು. ಚಿಲುಮೆ ನೀರನ್ನು ಗಾಜಿನ ಶೀಸೆಗಳಲ್ಲಿ ತುಂಬಿ ದೂರ ಪ್ರದೇಶಗಳಿಗೆ ರವಾನೆ ಮಾಡಲು ಪ್ರಾರಂಭವಾಯಿತು. ಇದರಿಂದ ಚಿಲುಮೆ ಇರುವ ಸ್ಥಳಕ್ಕೆ ಬಂದು ನಿರೀಕ್ಷಿತವಾಗಿಯೇ ದುಬಾರಿಯಾಗಿ ವೆಚ್ಚ ಮಾಡುವಷ್ಟು ಧನಿಕರಲ್ಲದವರೂ ಇನ್ನಿತರ ರೀತಿಯ ಅನಾನುಕೂಲತೆ ಇದ್ದವರೂ ಜಲಚಿಕಿತ್ಸೆಯನ್ನು ಪಡೆಯಲು ಸಹಾಯಕವಾಯಿತು. ಚಿಲುಮೆ ನೀರನ್ನೇ ಅಲ್ಲದೆ ಅದರ ವಿಶಿಷ್ಟ ಲವಣ ಅಥವಾ ಅನಿಲಗಳನ್ನು ಹೊಂದಿದ ಕೃತಕವಾಗಿ ತಯಾರಿಸಿದ ನೀರನ್ನೂ ಶೀಶೆಗಳಲ್ಲಿ ತುಂಬಿ ಮಾರಾಟಕ್ಕೆ ಇಡಲಾಯಿತು. ಕ್ರಮೇಣ ಈ ಶತಮಾನದ ಪ್ರಾರಂಭದ ಹತ್ತಿಪ್ಪತ್ತು ವರ್ಷಗಳ ಹೊತ್ತಿಗೆ ಚಿಲುಮೆ ನೀರು ಮತ್ತು ಜಲಚಿಕಿತ್ಸೆಯಲ್ಲಿ ನಂಬಿಕೆ ಕಡಿಮೆಯಾಯಿತಾದರೂ ಇಂದಿಗೂ ಸ್ನಾನಗೃಹಗಳು, ಚಿಲುಮೆ ನೀರಿನ ಮಾರಾಟ ಇತ್ಯಾದಿಗಳು ಇಂಗ್ಲೆಂಡಿನಲ್ಲಿಯೂ ಯೂರೋಪಿನಲ್ಲೂ ಕಂಡುಬಂದು, ಮುಖ್ಯವಾಗಿ ವಾಯುನೋವು ಚರ್ಮರೋಗಗಳ ಚಿಕಿತ್ಸೆಗೆ ಸೀಮಿತವಾಗಿವೆ.

	ವಾಸ್ತವವಾಗಿ ತಣ್ಣೀರಿನ ಸ್ನಾನ ಆ ಕೂಡಲೇ ಚರ್ಮದ ರಕ್ತನಾಳಗಳನ್ನು ಸಂಕುಚಿಸಿ ಚಳಿಯಾಗುವಂತೆಯೂ ಚರ್ಮ ಬಿಳಿಚಿಕೊಳ್ಳುವಂತೆಯೂ ಮಾಡುತ್ತದೆ. ಅನಂತರ ಸುಮಾರು 15-20 ಮಿನಿಟುಗಳು ಬೆವರುವುದು ಕಡಿಮೆ ಆಗಿ ದೇಹ ಶಾಖ ನಷ್ಟವೂ ಕಡಿಮೆ ಆಗಿ ದೇಹೋಷ್ಣತೆ ಹಾಗೂ ಗುಂಡಿಗೆಮಿಡಿತ ಮತ್ತು ಉಸಿರಾಟಗಳ ದರಗಳು ಹೆಚ್ಚುವುವು. ಚರ್ಮದ ರಕ್ತನಾಳಗಳು ಪುನಃ ಆಕುಂಚಿಸಿ ಅಧಿಕ ರಕ್ತ ಪರಿಚಲನೆಯಿಂದ ಚರ್ಮ ಕೆಂಪಗೂ ಬೆಚ್ಚಗೂ ಆಗುತ್ತದೆ. ಇದರ ಪರಿಣಾಮ ಹಾಯೆನಿಸುವ ಒಂದು ವಿಧವಾದ ಹಿತಕರ ಅನುಭವ. ಅನಂತರ ಯಥಾಸ್ಥಿತಿ. ಇದೇ ರೀತಿ ಹದವಾದ ಬಿಸಿನೀರಿನ ಸ್ನಾನದಿಂದಲೂ, ಆ ಕೂಡಲೆ ಚರ್ಮದ ರಕ್ತ್ತನಾಳಗಳು ಆಕುಂಚಿಸಿ ಸುಖಾನುಭವ ಉಂಟಾಗುತ್ತದೆ. ಆದರೆ ಬಹು ಬಿಸಿಯಾದ (ಸುಮಾರು 50 ಸೆಂ. ಮೀರಿ) ನೀರಿನ ಜಳಕಮಾಡಿದರೆ ಮೈಕಾವು ಜ್ವರದಂತೆ ಏರಿ ನಾಡಿ, ಉಸಿರಾಟಗಳ ದರ ಹೆಚ್ಚಿ ಸುಮಾರು 1 ಗಂಟೆ ಕಾಲ ಮೈಯೆಲ್ಲ ಬೆವರುತ್ತದೆ. ರಕ್ತಕಣಗಳ ಸಂಖ್ಯೆ ವೃದ್ಧಿಸುವುದಲ್ಲದೆ ಹೀಮೋಗ್ಲೊಬಿನ್ನಿನ ಪ್ರಮಾಣವೂ ಹೆಚ್ಚುವುದುಂಟು. ಮೂತ್ರೋತ್ಪತ್ತಿ ವಿಸರ್ಜನೆಗಳು ಕಡಿಮೆ ಆಗುವುದರಿಂದ ರಕ್ತದಲ್ಲಿ ಯೂರಿಯ, ಯೂರಿಕ್ ಆಮ್ಲ, ಕ್ರಿಯಾಟನ್ ಮುಂತಾದ ತ್ಯಾಜ್ಯ ವಸ್ತುಗಳೂ ಹೆಚ್ಚಾಗುವುದೂ ಉಂಟು. ದೇಹೋಷ್ಣತೆ ಕಡಿಮೆ ಆಗುತ್ತ ಮಾಮೂಲು ಮಟ್ಟವನ್ನು ಮುಟ್ಟುವ ವೇಳೆಗೆ ಈ ಬದಲಾವಣೆಗಳೂ ಕಡಿಮೆ ಆಗಿ ಮೊದಲಿನ ಸ್ಥಿತಿ ಪ್ರಾಪ್ತವಾಗುತ್ತದೆ.

	ಕೀಲುನೋವು, ವಾತರೋಗ, ಕೈಕಾಲುಸೆಳವು ಇವುಗಳಿಂದ ನರಳುವ ವ್ಯಕ್ತಿಗಳನ್ನು ಹದವಾದ ಬಿಸಿನೀರಿನಲ್ಲಿ ಕುತ್ತಿಗೆಯ ತನಕ ಮುಳುಗಿಸಿ ಅವರ ಕೈಕಾಲುದೇಹಗಳ ಚಲನವನ್ನು ಪ್ರೋತ್ಸಾಹಿಸುವುದು ಜಲಚಿಕಿತ್ಸೆಯಲ್ಲಿ ಒಂದು ವಿಶೇಷ ವಿಧ. ಚಲನೆಗೆ ಬೇಕಾಗುವ ಪ್ರಯತ್ನ ನೀರಿನೊಳಗೆ ಕಡಿಮೆಯಾಗಿ ಚಲನೆ ಸುಲಭಸಾಧ್ಯವಾಗುವುದರಿಂದ ಈ ರೋಗಿಗಳು ಉಪಯುಕ್ತ ಅಂಗಚಲನೆಯ ಮರುಪ್ರಾಪ್ತಿಗಾಗಿ ಇಂಥ ಪ್ರಯತ್ನವನ್ನು ಮಾಡಲಾಗುತ್ತದೆ. ದೇಹೋತ್ಪನ್ನ ವಿಷವಸ್ತುಗಳ ವಿಸರ್ಜನೆಗೂ ಬಿಸಿನೀರಿನ ಮುಳುಗಡೆ ಸಹಾಯಕವೆಂದು ಭಾವಿಸಲಾಗಿದೆ. ಅವ್ಯಕ್ತನೋವು, ಅಗೋಚರಸೋಂಕು ಇವುಗಳಿಗೂ ಬಿಸಿನೀರಿನ ಮುಳುಗಡೆಯನ್ನು ವಿಧಿಸಿದ್ದಾರೆ. ಬಿಸಿನೀರಿನ ಸ್ನಾನವಾದ ಬಳಿಕ ತಣ್ಣೀರಿನ ಸ್ನಾನವನ್ನು (ಅಥವಾ ತಿರುಗುಮುರುಗಾಗಿ) ಮಾನಸಿಕ ಅಸ್ವಸ್ಥತೆಗೆ ವಿಧಿಸುವುದುಂಟು. ಸಿಟ್û್ಸಬಾತ್ (ತಣ್ಣೀರಿನಲ್ಲಿ ಅಥವಾ ಬಿಸಿನೀರಿನಲ್ಲಿ ಪೃಷ್ಠಭಾಗವನ್ನು ಅದ್ದಿ ಕೆಲಕಾಲ ಕುಳಿತುಕೊಳ್ಳುವುದು) ಎಂಬ ವಿಧಾನವನ್ನು ಪ್ರಿಯೆಸ್‍ನಿಟ್ಸನೇ ಆಚರಣೆಗೆ ತಂದಿದ್ದ. ಇದರಲ್ಲಿ ಬಿಸಿ ನೀರನ್ನು ಮೂತ್ರಕಟ್ಟು, ಮುಟ್ಟುನೋವು ಇತ್ಯಾದಿಗಳ ಶಮನಕ್ಕೂ ತಣ್ಣೀರನ್ನೂ ಮಲಬದ್ಧತೆ, ಪಿತ್ತಕೋಶದ ನಿತ್ರಾಣ, ಷಂಡತನ ಇವುಗಳ ಚಿಕಿತ್ಸೆಗೂ ಉಪಯೋಗಿಸುವುದು ರೂಢಿ.

	ವ್ಯಕ್ತಿಯ ದೇಹಭಾಗವನ್ನೋ ಕತ್ತಿನತನಕ ಇಡೀ ವ್ಯಕ್ತಿಯನ್ನೋ ನೀರಿನಲ್ಲಿ ಮುಳುಗಿಸಿ ನೀರನ್ನು ಯಾಂತ್ರಿಕವಾಗಿ ರಭಸದಿಂದ ಕದಡಿ ಸುಳಿಸುತ್ತುವಂತೆ ಮಾಡುವುದು ಸುಮಾರು 1915ರಲ್ಲಿ ಆಚರಣೆಗೆ ಬಂತು. ಬಹುಕಾಲಿಕವಾದ ಕ್ಷಯರೋಗ ಫರಂಗಿರೋಗ ಸಂಬಂಧವಾದ ವ್ರಣಗಳು ಮುರಿದ ಮೂಳೆಗಂಟುಗಳು, ವಿಕಾರವಾದ ಸುರುಟಿಗೊಂಡ ಗಾಯಕಲೆಗಳು-ಇವುಗಳಿಗೆ ಈ ರೀತಿಯ ಜಲಚಿಕಿತ್ಸೆ ಮಾಡಲಾಗುತ್ತದೆ. ನೀರಿನೊಳಗೆ ಅದ್ದಿ ನೀವುವುದಕ್ಕೆ ಮೊದಲೂ ಅಂಗಗಳನ್ನು ಚಲಿಸುವುದಕ್ಕೆ ಮೊದಲೂ ಸ್ವಲ್ಪಕಾಲ ನೀರನ್ನು ಹೀಗೆ ಸುಳಿಸುತ್ತಿಸಿ ಚಿಕಿತ್ಸಿಸುವುದು ಆ ಕಾರ್ಯಕ್ರಮಗಳ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಉಂಟು. ನೀರನ್ನು ಟೊಳ್ಳುಸೂಜಿಯ ಮೂಲಕ ಇಲ್ಲವೆ ಕೊಳವೆಗಳ ಮೂಲಕ ಅಗಾಧ ಒತ್ತಡದಿಂದ ಚುರುಕಿಯಾಗಿ ಬೆನ್ನುಹುರಿಯ ಉದ್ದಕ್ಕೂ ಬಿಡುವ ವಿಧಾನಕ್ಕೆ ಸ್ಕಾಚ್ ಡೂಶ್ ಎಂದು ಹೆಸರು. ಸಾಮಾನ್ಯ ಚೇತನಕಾರಕವಾಗಿ ಇದನ್ನು ಉಪಯೋಗಿಸುತ್ತಾರೆ. ನೀರಿನೊಡನೆ ಸಂಪರ್ಕ ಒಂದು ಗಂಟೆಗಿಂತಲೂ ಹೆಚ್ಚಾಗಿದ್ದರೆ ಅದಕ್ಕೆ ನಿರಂತರ ಜಳಕವೆಂದು ಹೆಸರು. ಇಂಥ ಜಳಕದಲ್ಲಿ ನೀರಿನ ಉಷ್ಣತೆ ದೇಹೋಷ್ಣತೆಯಷ್ಟೇ ಇದ್ದರೆ ಬಾಧಕವಿಲ್ಲ. ಆದರೆ ನೀರಿನ ಉಷ್ಣತೆ ಹೆಚ್ಚಾಗಿದ್ದರೆ ದೇಹ ಕಾವೇರುವುದೂ ನೀರಿನ ಉಷ್ಣತೆ ಕಡಿಮೆ ಆಗಿದ್ದರೆ ದೇಹೋಷ್ಣತೆ ಕಡಿಮೆ ಆಗುವುದೂ ನಿರೀಕ್ಷಿತ. ಇಂಥ ಪರಿಣಾಮವನ್ನು ಉಂಟುಮಾಡಲೆಂದೇ ಅನುಗುಣವಾದ ನಿರಂತರ ಜಳಕವನ್ನು ಆಚರಿಸಲಾಗುತ್ತದೆ.

	ವಿಸ್ತಾರವಾದ ಎರಡು ಮೂರು ಹಚ್ಚಡಗಳನ್ನು ಜೋಡಿಸಿ ತಣ್ಣೀರಿನಲ್ಲಿ (50ಲಿಈ -70ಲಿಈ ಅಥವಾ 10ಲಿಅ-20ಲಿಅ) ಅದ್ದಿ ಹಿಂಡಿ ಸುಕ್ಕಿಲ್ಲದಂತೆ ಮಾಡಿ ಮಲಗಿದ ವ್ಯಕ್ತಿಯ ಮೇಲೆ ಹರಡಿ ಕಂಬಳಿಯನ್ನು ಹೊದ್ದಿಸಿ ಸುಮಾರು 1 ಗಂಟೆ ಹಾಗೇ ಬಿಟ್ಟಿದ್ದು ಅನಂತರ ಮೈಯನ್ನು ಉಜ್ಜಿ ಒರೆಸುವುದು ಇನ್ನೊಂದು ವಿಧಾನ. ಈ ರೀತಿ ಮಾಡಿದ ಮೇಲೆ ಮೈ ಉಷ್ಣತೆ ಕಡಿಮೆ ಆಗಿ ಮನಸ್ಸಿಗೆ ಆರಾಮಾಗಿ ಕೆಲಗಂಟೆಗಳು ನಿದ್ರೆ ಬಂದು ವ್ಯಕ್ತಿಗೆ ಸುಖವಾಗುತ್ತದೆ. ನೋವು ಶಮನ ಮಾಡಲು ಬಟ್ಟೆಯನ್ನು ಬಿಸಿನೀರಿನಲ್ಲಿ ಅದ್ದಿ ಹಿಂಡಿ ಶಾಖ ಕೊಡುವುದು ಎಲ್ಲರಿಗೂ ತಿಳಿದಿರುವ ವಿಷಯ. ವಿಶೇಷ ಕಟ್ಟಡ ಉಳ್ಳ ಕೋಣೆಯೊಳಗೆ ನೀರಿನ ಹಬೆಯೊಳಗೆ ಕೆಲಕಾಲ ಕಳೆಯುವ ವಿಧಾನವೂ ಉಂಟು. ಇದಕ್ಕೆ ಫಿನ್ನಿಷ್ ಸ್ನಾನ ಎಂದು ಹೆಸರು. ಹೆಚ್ಚಾಗಿ ಬೆವರುಸುರಿಸಿ ಅನಂತರ ಅಪ್ಯಾಯಮಾನವಾದ ಆರಾಮ ಅನುಭವ ಪಡೆಯಲು ಈ ವಿಧಾನವನ್ನು ಆಚರಿಸುತ್ತಾರೆ. ಆದರೆ ವೃದ್ಧರೂ ನಿಶ್ಯಕ್ತರೂ ಗುಂಡಿಗೆ ರೋಗ ಉಳ್ಳವರೂ ಈ ವಿಧಾನವನ್ನು ಆಚರಿಸುವುದು ಅಪಾಯಕರ.

	ಕ್ಷಾರಸ್ವಭಾವದ ಲವಣಗಳುಳ್ಳ ಚಿಲುಮೆ ನೀರಿನ ಸೇವನೆ ಸ್ನಾನಗಳನ್ನು ಸಣ್ಣಪುಟ್ಟ ಚರ್ಮವ್ಯಾಧಿಗಳಿಗೂ ಗಂಧಕ ಸಂಯುಕ್ತಗಳುಳ್ಳ ಚಿಲುಮೆ ನೀರನ್ನು ಸೋರಿಯಾಸಿಸ್ ಮುಂತಾದ ಕಟುತರವಾದ ಚರ್ಮವ್ಯಾಧಿಗಳಿಗೂ ಉಪಯೋಗಿಸುವುದುಂಟು. ಇಂಗಾಲದ ಡೈಆಕ್ಸೈಡ್ ಉಳ್ಳ ಚಿಲುಮೆ ನೀರನ್ನು ಗುಂಡಿಗೆ ರೋಗಗಳಲ್ಲೂ ಸಾಮಾನ್ಯ ಟಾನಿಕ್ ಆಗಿಯೂ ಉಪಯೋಗಿಸುತ್ತಾರೆ.

	ನೀರಿನಲ್ಲಿ ಮುಳುಗಡೆ, ಜಳಕ ಇವು ಅನೇಕ ಸಂದರ್ಭಗಳಲ್ಲಿ ತರ್ಕಸಮ್ಮತವಾದ ಮಾರ್ಗಗಳಾಗಿದ್ದು ನಿರೀಕ್ಷಿಸಿದ ಫಲವನ್ನು ಕೊಡುತ್ತವೆ. ಚಿಲುಮೆ ನೀರಿನ ಸೇವನೆ ಸ್ನಾನಗಳು ಇಂಗ್ಲೆಂಡ್ ಯೂರೋಪುಗಳಲ್ಲಿ ಅಮೆರಿಕ ಸಂಯುಕ್ತಸಂಸ್ಥಾನಗಳಿಗಿಂತ ಹೆಚ್ಚು ಪ್ರಚಾರದಲ್ಲಿವೆ. ಸಂಯುಕ್ತಸಂಸ್ಥಾನಗಳ ವೈದ್ಯರು, ಚಿಲುಮೆ ನೀರಿನ ಉಪಯೋಗದಿಂದ ಕಂಡುಬರುವ ಸತ್ಪರಿಣಾಮಗಳು ನೇರಫಲಗಳಲ್ಲದೆ ಪರೋಕ್ಷವಾದುವೆಂದೂ ಇಂಥ ಸ್ಥಳಗಳಲ್ಲಿಯ ಹವ, ಆವರಣ, ಕ್ಲುಪ್ತ ಆಹಾರ ವ್ಯಾಯಾಮ ನಡೆವಳಿಕೆಗಳು, ದೇಹ ಹಾಗೂ ಮನಸ್ಸಿಗೆ ನೆಮ್ಮದಿ ಉಂಟುಮಾಡಿ ಫಲಕೊಡುತ್ತವೆಂದೂ ನಂಬಿರುತ್ತಾರೆ. ವಾಸ್ತವವಾಗಿ ಚಿಲುಮೆ ನೀರಿನಲ್ಲಿ ವಿಲೀನವಾಗಿದ್ದು ಅವುಗಳ ವಿಶೇಷ ಚಿಕಿತ್ಸಾ ಗುಣವೆಂದು ಕಾರಣಭೂತವಾಗಿವೆ ಎಂದರೂ ಲವಣ ಅನಿಲಗಳು ಜಳಕಮಾರ್ಗದಿಂದ ದೇಹದೊಳಹೋಗಲಾರವು. ಅಲ್ಲದೆ ಇಂಥ ಲವಣ ಅನಿಲಗಳಿಂದ ಉಂಟಾಗುವುದೆಂದು ಪ್ರತಿಪಾದಿಸಲ್ಪಟ್ಟ ಫಲಗಳು ನಿಜವಾಗಿಯೂ ಲಭಿಸುತ್ತವೆ ಎನ್ನುವುದು ಪ್ರಾಯೋಗಿಕವಾಗಿ ಸಮರ್ಥಿಸಲ್ಪಟ್ಟಿಲ್ಲ. ಆದರೂ ಜನತೆಯ ಹಾಗೂ ಕೆಲವು ವಯಸ್ಕರ ನಂಬಿಕೆ ಹೋಗಿಲ್ಲ. ಜಲಚಿಕಿತ್ಸೆಯಿಂದ ಒದಗುವ ಅನುಕೂಲ ಸೀಮಿತವಾದರೂ ನಿಜವೆನ್ನುವುದನ್ನೂ ಮರೆಯುವಂತಿಲ್ಲ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ